ಧರ್ಮಪರತೆ -
ಧರ್ಮಪರವೂ ನ್ಯಾಯಶೀಲವೂ ಆದ ಜೀವನಕ್ರಮದಲ್ಲಿ ಮಾನವ ತೋರುವ ತಾದಾತ್ಮ್ಯಭಾವಕ್ಕೆ ಈ ಹೆಸರಿದೆ (ರೈಟ್ಯಸ್‍ನೆಸ್).  ನೀತಿ ಶಾಸ್ತ್ರದಲ್ಲಿ ಇದೊಂದು ಮೂಲತತ್ತ್ವ.  ಇದರ ಮೇಲೆಯೇ ಬಹುತೇಕ ನೀತಿ ಶಾಸ್ತ್ರದ ಬೆಳವಣಿಗೆ ಆಧಾರಿತವಾಗಿದೆ.  ನೀತಿಶಾಸ್ತ್ರದಲ್ಲಿ ಇದರಷ್ಟೇ ಪ್ರಮುಖವಾದ ಇನ್ನೆರಡು ಮೂಲತತ್ತ್ವಗಳೆಂದರೆ ಶ್ರೇಯ (ಗುಡ್) ಮತ್ತು ಮೌಲ್ಯ (ವ್ಯಾಲ್ಯೂ).  ಹೀಗೆ ಪಾಶ್ಚಾತ್ಯ ನೀತಿಶಾಸ್ತ್ರದ ತ್ರಿ - ತತ್ತ್ವಗಳಲ್ಲಿ ಧರ್ಮಪರತೆಯೂ ಒಂದಾಗಿದೆ.  ಇವು ಪರಸ್ಪರ ಬೇರೆ ಬೇರೆಯಾಗಿ ಕಂಡರೂ ಈ ಎಲ್ಲಕ್ಕೂ ಮೂಲವಾದ್ದು ಒಂದೇ - ಧರ್ಮ, ನೀತಿ.

	ಶ್ರೇಯಕ್ಕೂ ಧರ್ಮಪರತೆಗೂ ನಿಕಟ ಸಂಬಂಧವಿದೆ.  ಒಬ್ಬ ವ್ಯಕ್ತಿಯ ಕಾರ್ಯ ಧರ್ಮ (ಸರಿ) ಅಥವಾ ಅಧರ್ಮ (ತಪ್ಪು) ಎಂಬ ತೀರ್ಮಾನವನ್ನು ತೆಗೆದುಕೊಳ್ಳಲು ಅದು ಆ ಕಾರ್ಯದ ನಿಯಮಾನುಸಾರವಾಗಿದೆಯೇ ಎಂದು ನೋಡಬೇಕು.  ಯಾವುದು ನಿಯಮಾನುಸಾರವಾಗಿದೆಯೋ ಅದು ಶ್ರೇಯವೂ ಹೌದು. ಶ್ರೇಯವನ್ನು ನೇರವಾಗಿ ಲಕ್ಷಣೀಕರಿಸಲು ಸಾಧ್ಯವಿಲ್ಲ.  ಏಕೆಂದರೆ ಶ್ರೇಯವನ್ನು ಶ್ರೇಯವಾಗಿ ನಿರೂಪಿಸಲಾಗುವುದಿಲ್ಲ.  ಶ್ರೇಯವನ್ನು ಇತರ ತತ್ತ್ವಗಳ ಮುಖಾಂತರ (ಉದಾ : ಧರ್ಮಪರತೆ ) ನಿರೂಪಿಸಬಹುದು.  ಅಂದರೆ ಇಲ್ಲಿ ನಾವು ಮುಖ್ಯವಾಗಿ ತಿಳಿಯಬೇಕಾದದ್ದು ಧರ್ಮಪರತೆ ಹಾಗೂ ಶ್ರೇಯ ಇವುಗಳ ನಡುವೆ ಅಗತ್ಯ ಹಾಗೂ ಬೇರ್ಪಡಿಸಲಾರದ ಸಂಬಂಧವಿದೆ ಎಂಬುದನ್ನು.

	ಒಬ್ಬ ಧರ್ಮಪರನೇ ಅಲ್ಲವೇ ಎಂಬುದನ್ನು ಅವನ ಕರ್ಮದಿಂದ ತಿಳಿಯಬೇಕು.  ಯಾವುದು ಕರ್ತವ್ಯವೋ ಅದು ಧರ್ಮವೂ ಹೌದು.  ಉದಾ : ಕ್ಷತ್ರಿಯನ ಕರ್ತವ್ಯದೇಶವನ್ನು ಶತ್ರುಗಳಿಂದ ಕಾಪಾಡುವುದು ; ಕಳ್ಳಕಾಕರನ್ನು ಅಡಗಿಸುವುದು ;  ರಾಜ್ಯದಲ್ಲಿ ಶಾಂತಿಯನ್ನು ನೆಲಸುವಂತೆ ಮಾಡುವುದು ಇತ್ಯಾದಿ.  ರಾಜನಾದವ ತನ್ನ ಈ ಕರ್ತವ್ಯವನ್ನು ಪೂರೈಸಿದರೆ ಅವನನ್ನು ಧರ್ಮಶೀಲನೆಂದು ಕರೆಯುತ್ತೇವೆ.

	ಧರ್ಮಪರತೆಯಲ್ಲಿ ಧರ್ಮ ಎಂಬ ಪದ ಧೃ ಎಂಬ ಧಾತುವಿನಿಂದ ಬಂದಿರುವುದಾಗಿ ಭಾರತೀಯ ನೀತಿಶಾಸ್ತ್ರ ಹೇಳುತ್ತದೆ.  ಧೃ ಎಂದರೆ ಆಧಾರಭೂತವಾದದ್ದು.  ಜಗತ್ತನ್ನು ಪ್ರತಿಷ್ಠಾಪಿಸಿರುವಂಥಾದ್ದು, ಲೋಕವನ್ನು ಸಂರಕ್ಷಿಸುವಂಥಾದ್ದು ಎಂದು ಅರ್ಥ.

	ಭಾರತೀಯ ನೀತಿ ಶಾಸ್ತ್ರದಲ್ಲಿ ಧರ್ಮ ಗೋಪ್ಯವಾದದ್ದು ಎಂದು ಹೇಳಲಾಗಿದೆ.  ಹೇಗೆಂದರೆ, ಜನಸಾಮಾನ್ಯರಿಗೆ ಅದರ ಅರ್ಥವನ್ನು ಗ್ರಹಿಸಲು ಸಾಧ್ಯವಿಲ್ಲ.  ಋಷಿಗಳೂ ಜ್ಞಾನಿಗಳು ಮಾತ್ರ ಅದರ ನಿಜ ಸ್ವರೂಪವನ್ನು ಅರಿಯುವರೆಂದೂ ಈ ಅರ್ಥದಲ್ಲಿ ಜನಸಾಮಾನ್ಯರಿಗೆ ಅದು ರಹಸ್ಯವಾಗಿದೆ ಎಂದೂ ಇಲ್ಲಿ ಅರ್ಥೈಸಬೇಕು.
(ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ